ಹೂಗ್ಲಿನದಿ
	ಭಾರತದ ಈಶಾನ್ಯದಲ್ಲಿರುವ ಪಶ್ಚಿಮಬಂಗಾಲರಾಜ್ಯದ ಒಂದು ಮುಖ್ಯನದಿ. ಇಲ್ಲಿಯ ಭಾಗೀರಥಿನದಿಗೆ ಮಯೂರಾಕ್ಷಿ, ದಾಮೋದರ, ಕಂಗ್ರಾಬತಿ ಮತ್ತು ರೂಪನಾರಾಯಣಾ ಉಪನದಿಗಳು ಸೇರಿ ಹರಿಯುತ್ತಾ ಬಂಗಾಳ ಕೊಲ್ಲಿಯನ್ನು ಸೇರುವಾಗ ಈ ನದಿಯ ಕೊನೆಯ ಭಾಗಕ್ಕೆ ಹೂಗ್ಲಿನದಿ ಎನ್ನವರು.

	ಭಾಗೀರಥಿ ನದಿ ಗಂಗಾನದಿಯ ಉಪನದಿಯಾಗಿದ್ದು, ಕೋಲ್ಕತ ನಗರದ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಿದೆ. ಸು. ಕ್ರಿ.ಶ. 1500ರ ಹೊತ್ತಿಗೆ ಭಾಗೀರಥಿ ನದಿ ಗಂಗಾನದಿಯನ್ನು ಸೇರುವ ಅತ್ಯಂತ ಪ್ರಮುಖವಾದ ನದಿಯಾಗಿತ್ತು. ಅಲ್ಲಿಂದ ಅದರ ಪಥ ಪೂರ್ವಾಭಿಮುಖವಾಗಿ ಬದಲಾಣೆಯಾಯಿತು. ಇನ್ನೊಂದು ಮುಖ್ಯನದಿ ದಾಮೋದರ, ಬಿಹಾರದಲ್ಲಿ ಹರಿದು, ಭಾಗೀರಥಿನದಿಯನ್ನು ಕೋಲ್ಕತದ ಉತ್ತರಭಾಗದಲ್ಲಿ ಸೇರುತ್ತಿತ್ತು. ಈಗ ಅದರ ಪಥವು 130ಕಿಮೀ ದಕ್ಷಿಣಾಭಿಮುಖವಾಗಿದೆ. ನದಿಯ ಈ ನಿರಂತರ ಬದಲಾವಣೆಗೆ ಆ ಪ್ರದೇಶದ ಸಮತಟ್ಟಾದ ಭೂ ಭಾಗ ಕಾರಣವಾಗಿದೆ. ಗಂಗಾನದಿಯ ಒಂದು ಕವಲಾದ ಹೂಗ್ಲಿನದಿ ಉತ್ತರಭಾಗದಲ್ಲಿ 300 ಕಿಮೀ ದೂರಹರಿದು ಕೋಲ್ಕತ ನಗರವನ್ನು ಪ್ರವೇಶಿಸಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಬಂಗಾಳಕೊಲ್ಲಿಯಿಂದ ಕೋಲ್ಕತನಗರಕ್ಕೆ ಅತ್ಯಂತ ಮುಖ್ಯವಾದ ಸಾಗರ ಸಂಪರ್ಕ ಜಲಮಾರ್ಗ. ಇದು ಭಾಗೀರಥಿ ಮತ್ತು ಜಲಂಗಿ ನದಿಗಳು ಸಂಧಿಸುವ ಸ್ಥಳದಲ್ಲಿ ದಕ್ಷಿಣಕ್ಕೆ ಸು. 260ಕಿಮೀ ದೂರ ಹರಿಯುತ್ತದೆ. ಈ ಮುಖಜ ಭೂಮಿ ತುಂಬಾ ಫಲವತ್ತಾಗಿದ್ದು, ಪಶ್ಚಿಮ ಬಂಗಾಲದ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಕೈಗಾರಿಕಾ ಪ್ರದೇಶವಾಗಿದೆ. ಬಂಗಾಳ ಕೊಲ್ಲಿಯನ್ನು ಸೇರುವ ಈ ನದಿಯ ಮುಖಜಭೂಮಿ ಸು. 5 ರಿಂದ 32 ಕಿಮೀ ಅಗಲವಾಗಿದ್ದು, ಅನೇಕ ಅಳಿವೆಗಳನ್ನು ನಿರ್ಮಿಸಿದೆ. ಇಲ್ಲಿ ಎರಡು ಸೇತುವೆಗಳನ್ನು ಕಟ್ಟಲಾಗಿದೆ. ವಿವಿಧ ಉದ್ದೇಶಕ್ಕಾಗಿ ಈ ನದಿಯನ್ನು ಬಳಸುವುದರಿಂದ ನದಿ ಜೈವಿಕ ಪರಿಸರದ ಅಧ್ಯಯನದ ದೃಷ್ಟಿಯಿಂದ ಮುಖ್ಯವಾದುದು. ಏಕೆಂದರೆ ಭಾರತದ ಎಲ್ಲಾ ನದಿಗಳಂತೆ ಈ ನದಿ ಮಾಲಿನ್ಯದಿಂದ ಹೊರತಾಗಿಲ್ಲ.

	ಗಂಗಾನದಿ ಅನೇಕ ಪಟ್ಟಣಗಳ ಮೂಲಕ ಹರಿಯುವುದರಿಂದ ಮತ್ತು ಎಲ್ಲಾ ವಿವಿಧ ತ್ಯಾಜ್ಯ ವಸ್ತುಗಳು ಈ ನದಿಗೆ ಸೇರುವುದರಿಂದ ನದಿಯ ಗುಣಮಟ್ಟ ನಿರಂತರವಾಗಿ ಕೆಡುತ್ತಿದೆ. ಇದು ಇಲ್ಲಿಯ ಜೈವಿಕ ಪರಿಸರವನ್ನು ಅಸಮತೋಲನಗೊಳಿಸಿದೆ. ಈ ನದಿಯ ನೀರು ಯಾವುದೇ ಮಾನವನ ಅಥವಾ ಜೀವ ರಾಶಿಯ ಬಳಕೆಗೆ ಯೋಗ್ಯವಲ್ಲವೆನ್ನುವಂತಾಗಿದೆ. ಇದನ್ನರಿತ ಭಾರತ ಸರ್ಕಾರ 1980ರಲ್ಲಿ ಕೇಂದ್ರ ಗಂಗಾನದಿ ಪ್ರಾಧಿಕಾರ ಒಂದು ಸಮಗ್ರ ಯೋಜನೆಯನ್ನು ರೂಪಿಸಿತು. ಇದು ಮುಖ್ಯವಾಗಿ ಜೀವ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಮಾಡಲು ನಿಯೋಜಿಸಲಾಯ್ತು. ಅದರಂತೆ ದೇಶವಾರು 1974ರ ನೀರಿನ ಸಂರಕ್ಷಣೆ ಮತ್ತು ಅಪವಿತ್ರ ನೀರಿನ ನಿಯಂತ್ರಣ ಕಾಯ್ದೆಯಡಿ ನೀರನ್ನು ಸ್ವಚ್ಚವಾಗಿಡಲು ಪ್ರಯತ್ನಿಸಲಾಗಿದೆ.

	ಪಶ್ಚಿಮ ಬಂಗಾಳದ ಕೋಲ್ಕತ ನಗರ ಅತ್ಯಂತ ಜನಸಂದಣಿಯಿಂದ ಕೂಡಿದ್ದು, 2001ರ ಜನಗಣತಿಯ ಪ್ರಕಾರ 13,216,546 ಜನಸಂಖ್ಯೆಯನ್ನು ಹೊಂದಿದೆ. ಕ್ರಿ.ಶ. 1640ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಅನೇಕ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಿದ್ದು ಅದರಲ್ಲಿ ಮುಖ್ಯವಾಗಿ ಹತ್ತಿಯ ಬಟ್ಟೆ ಕೈಗಾರಿಕೆ, ಭತ್ತ ಮತ್ತು ಸೆಣಬು ಕೈಗಾರಿಕೆಗಳು ಹಾಗೂ ರಾಸಾಯನಿಕ ಮತ್ತು ರಬ್ಬರ್ ಉತ್ಪಾದನಾ ವಸ್ತುಗಳು ಮುಖ್ಯವಾದವುಗಳು. ಅಂದಿನಿಂದ ಇಂದಿನವರೆಗೆ ಆ ಕಾರ್ಖಾನೆಗಳ ತ್ಯಾಜ್ಯವಸ್ತುಗಳು ನದಿಯನ್ನು ಸೇರುತ್ತಾಬಂದಿವೆ.

	1537ರಲ್ಲಿ ಪೋರ್ಜುಗೀಸರಿಂದ ಹೂಗ್ಲಿನದಿಯೆಂದು ಹೆಸರಿಸಲಾಯ್ತು. ನಂತರ ಕ್ರಿ.ಶ. 1651ರಲ್ಲಿ ಇಂಗ್ಲಿಷ್‍ರು ಬಂಗಾಳದ ದಕ್ಷಿಣಭಾಗದಲ್ಲಿ ನೆಲೆಸಿದರು, ತದನಂತರ ಕ್ರಿ.ಶ. 1656ರಲ್ಲಿ ಡಚ್ಚರು ತಮ್ಮ ವಾಣಿಜ್ಯ ಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯಲ್ಲಿ ಹೂಗ್ಲಿನದಿಯ ದಂಡೆಗಳನ್ನು ತಮ್ಮ ನೆಲೆಯಾಗಿ ಬಳಸಿಕೊಂಡು ಬಂದರು. ಕಾರಣ ಆಗ ದೊರೆಯುತ್ತಿದ್ದ ಶುದ್ಧ ಜಲ ಮತ್ತು ಸುಲಭವಾಗಿ ಸಾಗರಕ್ಕೆ ನದಿಯ ಮೂಲಕ ಸಂಪರ್ಕ ದೊರೆಯುವುದಾಗಿತ್ತು.		
	(ಎಚ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ